ಪುರುವೆ -
	ಗ್ರೂಹಿಫಾರ್ಮಿಸ್ ವರ್ಗದ ರ್ಯಾಲಿಡೀ ಕುಟುಂಬಕ್ಕೆ ಸೇರಿದ ಪಕ್ಷಿ (ಕೂಟ್). ಇದರಲ್ಲಿ ಸುಮಾರು 16 ಪ್ರಭೇದಗಳು ಉಂಟು. ಭಾರತದಲ್ಲಿ ಪ್ಯೂಲಿಕ ಅಟ್ರ ಎಂಬ ಪ್ರಭೇದ ಕಾಣದೊರೆಯುತ್ತದೆ. ಉತ್ತರ ಅಮೆರಿಕ, ಜಪಾನ್, ಯುರೋಪ್, ಆಫ್ರಿಕ ಹಾಗೂ ದಕ್ಷಿಣ ಅಮೆರಿಕಗಳಲ್ಲಿ ಇತರ ಪ್ರಭೇದಗಳುಂಟು.

	ಪುರುವೆಗಳ ಅತಿ ಮುಖ್ಯ ಲಕ್ಷಣವೆಂದರೆ ಇವುಗಳ ಕಾಲ್ಬೆರಳುಗಳ ಅಂಚಿನ ಪೊರೆ ಅಗಲವಾಗಿ ಹರಡಿ ಒಂದು ಬಗೆಯ ಪಟ್ಟಿಯಂತಾಗಿರುವುದು. ಭಾರತದಲ್ಲಿ ಸಿಗುವ ಪುರುವೆ ಕೋಳಿಯಷ್ಟು ಗಾತ್ರದ ಹಕ್ಕಿ. ಮೈಬಣ್ಣ ಬೂದುಮಿಶ್ರಿತ ಕಪ್ಪು. ಈಜುವಾಗ ದೂರದಿಂದ ಬಾತುಕೋಳಿಯಂತೆಯೇ ಕಾಣುತ್ತದೆ. ಬಾಲ ಇಲ್ಲವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಮೋಟಾಗಿದೆ. ಕೊಕ್ಕು ದಂತದ ಬಣ್ಣಕ್ಕಿದೆ. ಹಣೆಯ ಮೇಲೆ ಬಿಳಿಯ ಫಲಕವೊಂದಿದೆ. ಹೆಣ್ಣು ಗಂಡುಗಳೆರಡೂ ಒಂದೇ ತೆರನಾಗಿದೆ.

	ಪುರುವೆಗಳು ಜೊಂಡು ತುಂಬಿದ ಕೆರೆಕೊಳಗಳಲ್ಲಿ ವಾಸಿಸುವುವು. ಸಾಮಾನ್ಯವಾಗಿ ಗುಂಪುಗುಂಪಾಗಿ ಇರುವುವು. ಹುಲ್ಲು, ಬತ್ತ ಮುಂತಾದ ಸಸ್ಯಗಳ ಎಳೆಯ ಕುಡಿಗಳು, ನೀರಿನಲ್ಲಿಯ ಕೆಳಗಿಡಗಳು, ಕೀಟ ಹಾಗೂ ಮೃದ್ವಂಗಿಗಳು ಇವುಗಳ ಪ್ರಧಾನ ಆಹಾರ. ತುಂಬ ಚೆನ್ನಾಗಿ ಈಜಬಲ್ಲ ಇವು ಹಗಲೆಲ್ಲ ಜೋರಾಗಿ ಕಹಳೆಧ್ವನಿಗೈಯುತ್ತ ಆಹಾರಾನ್ವೇಷಣೆಯಲ್ಲಿ ತೊಡಗಿರುವುವು. ಹೆದರಿದಾಗ ನೀರಿನ ಹಾಳೆಯ ಮೇಲೆ ಅರ್ಧ ಓಡುತ್ತ ಅರ್ಧ ಹಾರುತ್ತ ಚಲಿಸುತ್ತವೆ. ಸಾಮಾನ್ಯವಾಗಿ ಈಜುವಾಗ ಈ ಹಕ್ಕಿಯ ಹಿಂದೆ `ಗಿ ಆಕಾರದ ಗೆರೆಗಳು ಮೂಡುತ್ತವೆ.

	ಇವು ಗೂಡುಕಟ್ಟುವ ಕಾಲ ಭಾರತದಲ್ಲಿ ಜುಲೈ-ಆಗಸ್ಟ್. ಕೆರೆಯಂಚಿನ ಜೊಂಡುಗಳನ್ನು ಸೇರಿಸಿ ಗೂಡು ರಚಿಸಿ 6-10 ಮೊಟ್ಟೆಗಳನ್ನಿಡುತ್ತವೆ. ಪುರುವೆ ಭಾರತದಲ್ಲಿ ಸ್ಥಳೀಯ ಪಕ್ಷಿಯೂ ಹೌದು. ಅಂತೆಯೇ ಚಳಿಗಾಲದಲ್ಲಿ ಮಧ್ಯ ಹಾಗೂ ಪಶ್ಚಿಮ ಏಷ್ಯದ ದೇಶಗಳಿಂದ ವಲಸೆ ಬರುವ ಹಕ್ಕಿಯೂ ಹೌದು.
	(ವಿ.ಕೆ.ವಿ.)
(ಪರಿಷ್ಕರಣೆ : ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ